ಕೃಷಿ ಕೂಲಿ

ನಿರುದ್ಯೋಗಿಗಳು ಅಧಿಕವಾಗಿರುವ ಭಾರತದಂಥ ದೇಶಗಳಲ್ಲಿ ಕೃಷಿ ಕೆಲಸಗಾರರ ಕೂಲಿ ದರಗಳು ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ಬಂದ ಮಾಮೂಲು ದರಗಳನ್ನು ಅವಲಂಬಿಸಿರುತ್ತವೆ. ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಯ ನಿಬಂಧನೆಗಳನ್ವಯ ಗಣನೀಯ ಪ್ರಮಾಣದಲ್ಲಿ ತೀರ್ಮಾನವಾಗುವುದಿಲ್ಲ. ಮುಂದುವರಿದ ರಾಷ್ಟ್ರಗಳಲ್ಲಿ ಕೆಲಸಗಾರರ ನೇಮಕಕ್ಕೆ ಕೃಷಿರಂಗವೂ ಇತರ ಉದ್ಯಮ ರಂಗಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಅಲ್ಲಿ ಕಾರ್ಮಿಕರನ್ನು ಕೃಷಿರಂಗಕ್ಕೆ ಆಕರ್ಷಿಸಬೇಕಾದರೆ ಹೆಚ್ಚಿನ ಕೂಲಿದರಗಳನ್ನು ನೀಡಬೇಕಾಗುತ್ತದೆ. ಕೆಲವು ಕಾರ್ಯಗಳನ್ನು ಋತುಗಳಿಗೆ ಅನುಗುಣವಾಗಿ (ಉದಾ : ಬಿತ್ತನೆ, ಕಳೆ ತೆಗೆಯುವುದು, ಕಟಾವು ಒಕ್ಕಣೆ) ಶೀಘ್ರವಾಗಿ ಪೂರೈಸಬೇಕಾದಾಗ ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿ 

ಕೂಲಿದರಗಳು ತಾತ್ಕಾಲಿಕವಾಗಿ ಏರುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಕೆಲವು ಪ್ರದೇಶಗಳಲ್ಲಿ ಲೋಕೋಪಯೋಗಿ ಕೆಲಸಗಳು (ಕೆರೆ ಕಟ್ಟೆ ಕಾಲುವೆಗಳ ನಿರ್ಮಾಣ ಮುಂತಾದವು) ನಡೆಯುತ್ತಿದ್ದಾಗ ಕೂಲಿಗಾರರ ಕೊರತೆಯುಂಟಾಗಿ ಕೃಷಿ ಕೂಲಿದರಗಳಲ್ಲಿ ಏರಿಕೆಯುಂಟಾಗುತ್ತದೆ. ಕೆಲವು ವರ್ಷಗಳಲ್ಲಿ ಮಳೆಬೆಳೆಗಳು ತೃಪ್ತಿಕರವಾಗಿಲ್ಲದೆ ಕ್ಷಾಮ ಡಾಮರಗಳಿಗೆ ತುತ್ತಾದ ಪ್ರದೇಶಗಳಲ್ಲಿ ರೈತರಲ್ಲಿ ಕೂಲಿ ನೀಡುವ ಶಕ್ತಿ ಕುಗ್ಗುವುದಷ್ಟೇ ಅಲ್ಲದೆ ಕೆಲಸಕ್ಕಾಗಿ ಹಾತೊರೆಯುವವರ ಸಂಖ್ಯೆ ಏರಿ ಅವರಿಗೆ ಕೆಲಸ ದೊರೆಯುವುದೇ ಕಷ್ಟವಾಗುತ್ತದೆ. ಆಗ ಕಾರ್ಮಿಕರ ಹೊಟ್ಟೆ ತುಂಬುವಷ್ಟು ಕೂಲಿ ಕೂಡ ಸಿಗದೆ ಹೋಗಬಹುದು. ವ್ಯವಸಾಯೋತ್ಪನ್ನಗಳ ಬೆಲೆಗಳು ಏರುತ್ತಿರುವ ಸಮಯದಲ್ಲಿ ಸಾಮಾನ್ಯವಾಗಿ ಕೃಷಿ ಕೂಲಿದರಗಳೂ ಏರುತ್ತವೆ. ಇಷ್ಟಾದರೂ ಸಾಮಾನ್ಯವಾಗಿ ಬೇಡಿಕೆ ಪೂರೈಕೆಗಳ ನಿಯಮದಿಂದ ಕೃಷಿ ಕೂಲಿ ಹೊರತಾಗಿ, ಸಂಪ್ರದಾಯಕ್ಕೆ ಅನುಸಾರವಾಗಿ ನಿರ್ಧಾರವಾಗುತ್ತದೆ. ಕೂಲಿದರಗಳು ಸ್ಥೂಲವಾಗಿ ಆಯಾ ದೇಶಗಳ ಅಥವಾ ಪ್ರಾಂತ್ಯಗಳ ಆರ್ಥಿಕಾಭಿವೃದ್ಧಿಯ ಅಳತೆಗೋಲುಗಳು.

	ಕೃಷಿ ಕೂಲಿದರಗಳು ಕೆಲಸ ಮತ್ತು ಋತುಗಳಿಗನುಗುಣವಾಗಿ ಮಾತ್ರವೇ ಅಲ್ಲದೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಹೆಚ್ಚು ಕಡಿಮೆಯಾಗುತ್ತವೆ; ಹುಡುಗರು, ದೊಡ್ಡವರು, ಹೆಣ್ಣಾಳುಗಳು, ಗಂಡಾಳುಗಳಿಗೆ ಬೇರೆಬೇರೆಯಾಗಿರುತ್ತವೆ. ಕೆಲಸ ಒಂದೇ ಬಗೆಯದಾಗಿದ್ದಾಗಲೂ ಗಂಡಾಳುಗಳಿಗೆ ಹೆಣ್ಣಾಳುಗಳಿಗಿಂತ ಹೆಚ್ಚಿನ ಕೂಲಿ ದೊರೆಯುತ್ತದೆ. ಹಾಗೆಯೇ ವಯಸ್ಕರಿಗೆ ಕಿರಿಯರಿಗಿಂತ ಅಧಿಕ ಕೂಲಿ ದೊರೆಯುತ್ತದೆ. ಕೆಲವು ವ್ಯವಸಾಯ ಕಾರ್ಯಗಳಲ್ಲಿ (ಉದಾ : ಉಳುಮೆ, ಅಗತೆ) ಹೆಚ್ಚಿನ ದೈಹಿಕ ಶ್ರಮ ಅಗತ್ಯ. ಆದ್ದರಿಂದ ಇಂಥ ಕೆಲಸಗಳಿಗೆ ಗಂಡಸರೇ ನೇಮಕವಾಗುತ್ತಾರೆ. ಅವರ ಕೂಲಿ ದರ ಸಾಮಾನ್ಯ ದರಗಳಿಗಿಂತ ಹೆಚ್ಚಾಗಿರುತ್ತದೆ. ಕೃಷಿ ಕೂಲಿಯನ್ನು ಹಣದ ರೂಪದಲ್ಲಾಗಲಿ ಧಾನ್ಯದ ರೂಪದಲ್ಲಾಗಲಿ ಕೊಡುವುದು ವಾಡಿಕೆ. ಕೆಲವು ವೇಳೆ ಕೃಷಿ ಕಾರ್ಮಿಕರು ಈ ಎರಡು ರೂಪಗಳಲ್ಲೂ ತಮ್ಮ ಕೂಲಿಯನ್ನು ಪಡೆಯುತ್ತಾರೆ.

	ಕೃಷಿ ಕಾರ್ಮಿಕರ ಬಗ್ಗೆ ತನಿಖೆ ನಡೆಸಿ ವರದಿ ಒಪ್ಪಿಸಲು ಭಾರತ ಸರ್ಕಾರ ಪ್ರಥಮ ಮತ್ತು ದ್ವಿತೀಯ ಪಂಚವಾರ್ಷಿಕ ಯೋಜನೆಗಳ ಪೂರ್ವ ಎರಡು ತನಿಖಾ ಆಯೋಗಗಳನ್ನು ನೇಮಿಸಿತ್ತು. ಅವುಗಳ ವರದಿಗಳಿಂದ ಭಾರತದಲ್ಲಿ ಕೃಷಿ ಕಾರ್ಮಿಕರ ಕೂಲಿದರಗಳು (ಸರಾಸರಿ) ಮತ್ತು ಕೂಲಿಪಾವತಿ ವಿಧಾನಗಳ ಬಗ್ಗೆ ಈ ವಿವರಗಳು ದೊರಕುತ್ತವೆ :

								ವರ್ಷ
                     				  1950-51         1955-56
ದಿನಗೂಲಿ ದರಗಳು			 ರೂ.			    ರೂ.
	1. ಗಂಡಾಳು				1.09			   0.96
	2. ಹೆಣ್ಣಾಳು				0.68			   9.59
	3. ಹುಡುಗರು				0.70			   0.53

ದೇಶದಲ್ಲಿ ಕೊಡಲಾದ ಒಟ್ಟು ಕೃಷಿ ಕೂಲಿಯ
ಅಂದಾಜು (ಕೋಟಿ ರೂ.ಗಳಲ್ಲಿ)			500				520

	ಕೂಲಿ ಪಾವತಿಯ ವಿಧಾನ
	1. ಹಣದ ರೂಪದಲ್ಲಿ			56%				49%
	2. ಧಾನ್ಯ ರೂಪದಲ್ಲಿ			31%				40%
	3. ಎರಡೂ ರೂಪಗಳಲ್ಲಿ			13%				11%

	ಸಾಮಾನ್ಯವಾಗಿ ಆಹಾರಧಾನ್ಯಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯದೆ ಬೆಲೆಗಳು ಏರಿದ್ದಾಗ ಕೃಷಿಕೂಲಿಗಾರರು ತಮ್ಮ ಕೂಲಿಯನ್ನು ಧಾನ್ಯ ರೂಪದಲ್ಲಿ ಪಡೆಯಲಿಚ್ಛಿಸುತ್ತಾರೆ. ಆಹಾರ ಧಾನ್ಯಗಳ ಬೆಲೆಗಳು ಇಳಿಮುಖವಾಗಿ, ಮಾರುಕಟ್ಟೆಯಲ್ಲಿ ಧಾನ್ಯದ ಕೊರತೆ ಇಲ್ಲದ ಪಕ್ಷದಲ್ಲಿ ಅವರು ತಮ್ಮ ಕೂಲಿಯನ್ನು ಹಣದ ರೂಪದಲ್ಲಿ ಪಡೆಯಲು ಆಶಿಸುತ್ತಾರೆ. ಕೃಷಿ ಕೂಲಿಗಾರರು-ಅದರಲ್ಲೂ ವಾರ್ಷಿಕ ಆಧಾರದ ಮೇಲೆ ನೇಮಕವಾದವರು-ತಮ್ಮ ವಾರ್ಷಿಕ ಕೂಲಿಯ ಜೊತೆಗೆ ದಿನದ ಊಟವನ್ನು ತಮ್ಮ ಯಜಮಾನನ ಮನೆಯಲ್ಲಿ ಪಡೆಯುವುದಲ್ಲದೆ ತಮಗೆ ಬೇಕಾದ ಬಟ್ಟೆಬರೆಗಳನ್ನೂ ಬೀಡಿ, ತಂಬಾಕು ಮುಂತಾದವನ್ನೂ ಪಡೆಯುತ್ತಾರೆ. ಹಂಗಾಮಿಯಾಗಿ ನೇಮಕವಾದ ದಿನಗೂಲಿ ಕಾರ್ಮಿಕರೂ ತಮ್ಮ ಕೂಲಿಯ ಹಣ ಅಥವಾ ಧಾನ್ಯದ ಜೊತೆಗೆ ಒಂದು ಊಟವನ್ನು ಸಹ ಕೆಲವು ವೇಳೆ ಪಡೆಯುತ್ತಾರೆ. ಈ ವ್ಯವಸ್ಥೆಯಿಂದ ಕೃಷಿ ಕೂಲಿಗಾರನಿಗೆ ಕೆಲಸದಲ್ಲಿ ಆಸಕ್ತಿ ಹೆಚ್ಚಿ ಅವನ ದಕ್ಷತೆ ಹೆಚ್ಚುವ ಸಾಧ್ಯತೆ ಇದೆ. ಇದೇ ರೀತಿ ಕೆಲವು ಸಾರಿ ಬತ್ತದ ಕೊಯ್ಲಿನ ಕಾಲದಲ್ಲಿ ಕೂಲಿಯ ಜೊತೆಗೆ ಆತ ಬತ್ತದ ಒಂದು ಸಣ್ಣ ಹೊರೆಯನ್ನೂ ಪಡೆಯಬಹುದು.

	ಕೃಷಿ ಕೂಲಿ ಪಾವತಿಯ ಎರಡು ಪದ್ಧತಿಗಳು ವಾಡಿಕೆಯಲ್ಲುಂಟು. ಒಂದು ಅವರು ಕೆಲಸ ಮಾಡುವ ಕಾಲಕ್ಕನುಗುಣವಾಗಿ ಕೂಲಿ (ದಿನಗೂಲಿ) ಕೊಡುವುದು; ಎರಡು, ಮಾಡಬೇಕಾದ ಕೆಲಸವನ್ನು ಗುತ್ತಿಗೆಗೆ ಕೊಟ್ಟು ಅದಕ್ಕೆ ತಕ್ಕಂತೆ ಕೂಲಿ ಪಾವತಿ ಮಾಡುವುದು. ಮೊದಲನೆಯ (ಕಾಲಾನುಗುಣ) ಪದ್ಧತಿಯಲ್ಲಿ ಕೆಲಸಗಾರನ ಕೂಲಿ ಅವನು ಮಾಡಿದ ಕೆಲಸದ ಪ್ರಮಾಣವನ್ನಾಗಲಿ ಗುಣಮಟ್ಟವನ್ನಾಗಲಿ ಅವಲಂಬಿಸಿರುವುದಿಲ್ಲ; ಅವನು ಕೆಲಸದಲ್ಲಿ ನಿರತನಾಗಿದ್ದ ಕಾಲವನ್ನು ಅವಲಂಬಿಸಿರುತ್ತದೆ. ಈ ಪದ್ಧತಿಯಂತೆ ಕೂಲಿ ಕೊಡುವಾಗ ಕೆಲಸಗಾರರ ಮೇಲುಸ್ತುವಾರಿ ಅಗತ್ಯವಾಗುತ್ತದೆ. ಅಥವಾ ಯಜಮಾನನೂ ಆಳುಗಳ ಜೊತೆಯಲ್ಲಿ ಒಬ್ಬನಾಗಿ ಹೊಲದಲ್ಲಿ ದುಡಿಯುತ್ತಾನೆ.

	ವ್ಯವಸಾಯ ಕಾರ್ಯಗಳನ್ನು ಕೈಗಾರಿಕೆಯಲ್ಲಿಯಂತೆ ಸುಲಭವಾಗಿ ಶಿಷ್ಟೀಕರಣಗೊಳಿಸಲು ಸಾಧ್ಯವಿಲ್ಲ. ಕೆಲವು ಕಾರ್ಯಗಳಲ್ಲಿ ಮಾತ್ರ ಇದು ಸಾಧ್ಯ. ಗಿಡದಿಂದ ಹತ್ತಿಯನ್ನು ಬಿಡಿಸುವುದು; ನೆಲಗಡಲೆ, ಆಲೂಗೆಡ್ಡೆ ಮುಂತಾದವುಗಳಿಗೆ ಅಗತೆ ಮಾಡುವುದು ಮತ್ತು ಅವನ್ನು ಗಿಡದಿಂದ ಬಿಡಿಸುವುದು; ದ್ರಾಕ್ಷಿ ಮತ್ತಿತರ ಹಣ್ಣುಗಳನ್ನು ಗಿಡದಿಂದ ಕೊಯ್ಯುವುದು ಇತ್ಯಾದಿ ಕಾರ್ಯಗಳಲ್ಲಿ ಕೂಲಿಗುತ್ತಿಗೆ ವಾಡಿಕೆಯಲ್ಲಿದೆ. ಹತ್ತಿ ಬೆಳೆಯುವ ಕಡೆಗಳಲ್ಲಿ ಇಂತಿಷ್ಟು ಚೀಲ ಹತ್ತಿ ಬಿಡಿಸಿದರೆ ಇಂತಿಷ್ಟು ಕೂಲಿ ಎಂದು ನಿಗದಿ ಮಾಡುತ್ತಾರೆ. ಹೆಚ್ಚು ಹತ್ತಿ ಬಿಡಿಸಿದ ಆಳು ಹೆಚ್ಚು ಕೂಲಿ ದುಡಿಯಲು ಅನುಕೂಲವಾಗುತ್ತದೆ. ಆ ಕೆಲಸಕ್ಕೆ ದಿನಗೂಲಿಯಂತೆ ಕಾರ್ಮಿಕರನ್ನು ನೇಮಕಮಾಡಿಕೊಂಡಿದ್ದರೆ ಅವನು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಲು ಆಸಕ್ತಿ ತೋರುವುದಿಲ್ಲ.

	ಕೈಗಾರಿಕಾ ಕ್ಷೇತ್ರದ ಕೂಲಿಗಿಂತ ಕೃಷಿಕೂಲಿ ಬಹಳ ಕಡಿಮೆ ಮಟ್ಟದಲ್ಲಿರುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯ ಮತ್ತು ಬಹು ಮುಖ್ಯವಾದ ಕಾರಣವೆಂದರೆ ಕೃಷಿ ಕಾರ್ಮಿಕರಲ್ಲಿ ಸಂಘಟನೆ ಇಲ್ಲದಿರುವುದು. ಕೃಷಿ ಕಾರ್ಮಿಕರು ಸಾಮಾನ್ಯವಾಗಿ ಅನಕ್ಷರಸ್ಥ ಮತ್ತು ಅವಿದ್ಯಾವಂತ ಗುಂಪಿಗೆ ಸೇರಿದವರು. ಅಲ್ಲದೆ ಕೈಗಾರಿಕಾ ಕಾರ್ಮಿಕರಂತೆ ಸಾವಿರಾರು ಜನ ಒಂದೆಡೆ ಕಲೆತು ಕೆಲಸಮಾಡುವುದಿಲ್ಲ. ಇವರು ದೇಶಾದ್ಯಂತ ಹರಡಿಕೊಂಡಿದ್ದಾರೆ. ಇವರಲ್ಲಿ ಸಂಘಟನ ಶಕ್ತಿ ಇಲ್ಲ. ಅದಕ್ಕೆ ಮುಂದಾಳುತನವೂ ಇವರಲ್ಲಿಲ್ಲ. ಇದರಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಮಿಕ ಸಂಘಗಳಿಲ್ಲ; ಮತ್ತು ಹೆಚ್ಚು ಕೂಲಿ ಪಡೆಯಲು ದಣಿಗಳೊಡನೆ ಚೌಕಾಸಿ ಮಾಡುವ ಶಕ್ತಿ ಇವರಿಗೆ ಇಲ್ಲ. ಇದರ ಜೊತೆಗೆ, ಅನೇಕ ಮಂದಿ ಕೂಲಿಗಾರರು ಭೂಮಾಲೀಕರಿಂದ ಪಡೆದ ಸಾಲದ ಕೂಪದಲ್ಲಿ ಬಿದ್ದು ತೊಳಲುತ್ತಿರುತ್ತಾರೆ. ಸಾಲಗಾರರಾದ ಕೃಷಿ ಕಾರ್ಮಿಕರು ಸಾಲಿಗರಾದ ಭೂಮಾಲೀಕರ ಹಂಗಿನಲ್ಲಿರುತ್ತಾರೆ. ಕೆಲಸಗಳಿಗೆ ಕೂಲಿಯನ್ನು ಮಾಲೀಕರೇ ನಿರ್ಧರಿಸುತ್ತಾರೆ. ಕಾರ್ಮಿಕರು ಅದನ್ನೊಪ್ಪಿ ಕೆಲಸ ಮಾಡಬೇಕಾಗುತ್ತದೆ. ಇದು ಏಕಪಕ್ಷೀಯ. ಇಷ್ಟೇ ಅಲ್ಲ. ಭೂಮಾಲೀಕತ್ವ ಸಾಮಾನ್ಯವಾಗಿ ಸಮಾಜದ ಉಚ್ಚಜಾತೀಯರಲ್ಲಿ ನಿಹಿತವಾಗಿದೆ. ಕೃಷಿ ಕಾರ್ಮಿಕರೆಲ್ಲ ಸಾಮಾಜಿಕವಾಗಿ ಕೆಳ ಜಾತಿಗಳಿಗೆ ಸೇರಿದವರಾಗಿರುತ್ತಾರೆ. ಭೂಮಾಲೀಕರು ಇವರನ್ನು ಸ್ವಪ್ರಯೋಜನಕ್ಕಾಗಿ ದುಡಿಸಿಕೊಂಡು ಸುಲಿಗೆ ಮಾಡಿರುವುದುಂಟು.

	ಕೃಷಿ ಕೂಲಿ ಕಡಿಮೆ ಮಟ್ಟದಲ್ಲಿರುವುದಕ್ಕೆ ಕಾರ್ಮಿಕರ ಚೌಕಾಸಿಯ ಅಸಾಮಥ್ರ್ಯವಷ್ಟೇ ಕಾರಣವಲ್ಲ. ಕೃಷಿ ಕಾರ್ಮಿಕರಿಗೆ ಬೇಡಿಕೆ ಸಾಮಾನ್ಯವಾಗಿ ದೊಡ್ಡ ಹಿಡುವಳಿಗಾರರಿಂದಲೇ ಬರಬೇಕು. ಸಣ್ಣ ಹಿಡುವಳಿದಾರರ ಬೇಡಿಕೆ ಬಹಳ ಅಲ್ಪ. ಸಣ್ಣ ಹಿಡುವಳಿದಾರರಿಗೆ ಕೂಲಿ ಕೊಡುವ ಚೈತನ್ಯವೂ ಕಡಿಮೆ. ಆದ್ದರಿಂದ ಅವರು ತಮ್ಮ ತಾಕುಗಳ ಕೆಲಸಗಳನ್ನು ಆದಷ್ಟೂ ತಾವೇ ತಮ್ಮ ಕುಟುಂಬದವರ ಸಹಾಯದೊಂದಿಗೆ ಮುಗಿಸಿಕೊಳ್ಳಲು ಬಯಸುತ್ತಾರೆ. ಅಗತ್ಯವಿದ್ದಾಗ ಅವರು ಹೆಚ್ಚು ದುಡಿಯುವುದೂ ಉಂಟು. ಇದರ ಜೊತೆಗೆ ಗ್ರಾಮಗಳಲ್ಲಿ ಜಾರಿಯಲ್ಲಿರುವ ಮುಯ್ಯಾಳು ಪದ್ಧತಿಯನ್ವಯ ಅಕ್ಕಪಕ್ಕದ ರೈತರು ಪರಸ್ಪರವಾಗಿ ನೆರವು ನೀಡಿ, ಪಡೆದು ಕೃಷಿಕಾರ್ಯಗಳನ್ನು ಮುಗಿಸಿಕೊಳ್ಳುತ್ತಾರೆ. ಅಲ್ಲದೆ ವ್ಯವಸಾಯದ ಯಾಂತ್ರೀಕರಣದಿಂದಾಗಿ ಈಗಿನ ದೊಡ್ಡ ಹಿಡುವಳಿದಾರರಿಂದಲೂ ಕೃಷಿ ಕಾರ್ಮಿಕರಿಗೆ ಬೇಡಿಕೆ ದುರ್ಬಲವಾಗುವ ಸೂಚನೆಗಳು ತೋರುತ್ತಿವೆ. ಆದರೆ ಕೃಷಿ ಕಾರ್ಮಿಕರ ಸಂಖ್ಯೆ ಅನೇಕ ಕಾರಣಗಳಿಂದ ದಿನೇ ದಿನೇ ವೃದ್ಧಿಯಾಗುತ್ತಿದೆ. ಕೃಷಿ ಕಾರ್ಯಗಳಲ್ಲಿ ಅಪ್ರಾಪ್ತ ವಯಸ್ಕರನ್ನು ನೇಮಿಸಿಕೊಳ್ಳಬಾರದೆಂಬ ನಿಯಮವೂ ಇಲ್ಲ; ಇದ್ದಾಗ್ಯೂ ಅದನ್ನು ಪಾಲಿಸುವುದು ಕಷ್ಟ.. ಇದಲ್ಲದೆ ಹಲವು ವ್ಯವಸಾಯ ಕೆಲಸಗಳಿಗೆ ಹೆಣ್ಣಾಳುಗಳನ್ನು ಸೇರಿಸಿಕೊಳ್ಳಬಹುದು. ಇದೆಲ್ಲದರಿಂದಾಗಿ ಕೃಷಿ ಕಾರ್ಮಿಕರ ಪೂರೈಕೆ ಬೇಡಿಕೆಗಿಂತಲೂ ಬಹುಪಾಲು ಅಧಿಕವಾಗಿ ಕೂಲಿದರಗಳು ಬಹುಮಟ್ಟಿಗೆ ಕುಸಿಯಲು ಕಾರಣವಾಗಿದೆ.

	ಕೃಷಿಯ ಕನಿಷ್ಠ ಕೂಲಿ ಕಾಯಿದೆ : 1948ರಲ್ಲಿ ಅಂಗೀಕೃತವಾದ ಕನಿಷ್ಠ ಕೂಲಿಕಾಯಿದೆ ಕೂಲಿ ದರಗಳನ್ನು ಕ್ರಮಬದ್ಧಪಡಿಸುವ ಹಾದಿಯಲ್ಲಿ ಒಂದು ಮೈಲಿಗಲ್ಲಾಗಿದೆ. ಕೂಲಿದರಗಳು ಅಸಹಜವಾಗಿ ಕಡಿಮೆ ಇರುವ, ಕಾರ್ಮಿಕರ ಸಂಘ ಸಂಸ್ಥೆಗಳಿಲ್ಲದ ಇದ್ದರೂ ಉಚ್ಛ್ರಾಯ ಸ್ಥಿತಿಯಲ್ಲಿಲ್ಲದ ಕಡೆಗಳಲ್ಲಿ ಕನಿಷ್ಠ ಕೂಲಿಯನ್ನು ನಿಗದಿ ಮಾಡುವುದು ಅಪೇಕ್ಷಣೀಯವೆಂದು ಪರಿಗಣಿಸಲಾಗಿದೆ. ಈ ಕಾಯಿದೆಯನ್ವಯ ಕೃಷಿ ಕಾರ್ಮಿಕರು ಸಹ ಕನಿಷ್ಠ ಕೂಲಿ ಮಿತಿಗೆ ಅರ್ಹರಾಗಿರುತ್ತಾರೆ. 

	ಕನಿಷ್ಠ ಕೂಲಿಯನ್ನು ನಿಗದಿ ಮಾಡುವಾಗ ಕಾರ್ಮಿಕರ ಸಾಮಾನ್ಯ ಜೀವನ ಮಟ್ಟ , ನ್ಯಾಯವಾದ ಕೂಲಿ, ಉದ್ಯಮ ಅಥವಾ ಯಜಮಾನ ಕೊಡಲು ಶಕ್ತವಾದ ಕೂಲಿದರ, ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಗಂಡಾಳಿಗೆ ಕೊಡುವ ಕೂಲಿ ಅವನ ಸಂಸಾರದ ಪೋಷಣೆಗೆ ಸಾಕಾಗುವಷ್ಟಿರಬೇಕು. ಹೆಂಗಸಿಗೆ ಆಕೆಯ ಜೀವನಕ್ಕೆ ಸಾಕಾಗುವಷ್ಟು ಮಟ್ಟಿಗೆ ಕೂಲಿ ಸಿಕ್ಕರೆ ಸಾಕು. ಈ ಅಂಶಗಳನ್ನು ದೃಷ್ಟಿಯಲ್ಲಿಟ್ಟಕೊಂಡು ನಿಗದಿ ಮಾಡಿದ ಕೂಲಿದರವನ್ನು ಜಾರಿಗೆ ತರಲು ಜಿಲ್ಲಾ ಮತ್ತು ರಾಜ್ಯಮಟ್ಟಗಳಲ್ಲಿ ಕೃಷಿಕೂಲಿ ಮಂಡಳಿಗಳನ್ನು ರಚಿಸಬೇಕು. ಇವು ಕಾರ್ಮಿಕ ಪ್ರತಿನಿಧಿಗಳು, ಜಮೀನು ಹಿಡುವಳಿದಾರರು ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳಿಂದ ಕೂಡಿದ ತ್ರಿಪಕ್ಷೀಯ ಮಂಡಳಿಗಳಾಗಿರಬೇಕು. ಪ್ರತಿಯೊಂದು ಜಿಲ್ಲೆಗೂ ಅಥವಾ ಜಿಲ್ಲೆಯ ಸಮರೂಪದ ಕೃಷಿ ಪ್ರದೇಶಕ್ಕೂ ಕೂಲಿದರಗಳನ್ನು ನಿಗದಿ ಮಾಡಿ ಜಾರಿಗೆ ತರಬೇಕು. ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಂಡಳಿಯ ನ್ಯಾಯಾಧೀಶರ ತೀರ್ಮಾನಕ್ಕೊಳಪಡಿಸಬೇಕು.

ಕೃಷಿಯ ಕನಿಷ್ಠ ಕೂಲಿಯನ್ನು ನಿಗದಿ ಮಾಡಿ ಜಾರಿಗೆ ತರವುದು ಸುಲಭವಲ್ಲ. ಈ ದಿಶೆಯಲ್ಲಿ ಅನೇಕ ಎಡರು ತೊಡರುಗಳಿವೆ. ಮೊದಲಾಗಿ ಕನಿಷ್ಠ ಕೂಲಿಯನ್ನು ನಿಗದಿ ಮಾಡುವುದೇ ತುಂಬ ಪ್ರಯಾಸದ ಕೆಲಸ. ಕೂಲಿಯನ್ನು ನಿಗದಿ ಮಾಡುವಾಗ ಮೇಲೆ ಹೇಳಿದಂತೆ ಕಾರ್ಮಿಕನ ಜೀವನಮಟ್ಟ ಮತ್ತು ನ್ಯಾಯವಾದ ದರಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾದರೂ ಬಹು ಮುಖ್ಯವಾಗಿ ನಿಗದಿ ಮಾಡಿದ ಕೂಲಿಯನ್ನು ದಣಿ ಕೊಡಲು ಶಕ್ತನೆ, ಇಲ್ಲವೆ ಎಂಬುದನ್ನು ಗಮನದಲ್ಲಿಡಬೇಕು. ಅಂದರೆ ಕೃಷಿಕನಿಗೆ ಅವನ ಕಸಬು ಎಷ್ಟು ಲಾಭದಾಯಕ ಎಂಬ ಪ್ರಶ್ನೆಯನ್ನು ಇದು ಅವಲಂಬಿಸಿದೆ. ಆದ್ದರಿಂದ ಅವನ ಉತ್ಪಾದನ ಕಾರ್ಯದ ಆಯವ್ಯಯಗಳನ್ನು ಕಂಡುಹಿಡಿಯಬೇಕಾಗುತ್ತದೆ. ಇದು ಅಷ್ಟು ಸುಲಭವಲ್ಲ. ಉತ್ಪಾದನೆಯ ಖರ್ಚು, ಆ ಪ್ರದೇಶದ ಬೆಳೆಗಳು, ಅವಕ್ಕೆ ಉಪಯೋಗಿಸುವ ಉತ್ಪಾದನಾಂಗಗಳು ಮತ್ತು ಅವಕ್ಕೆ ತಗಲುವ ಖರ್ಚು, ಉತ್ಪನ್ನದ ಮಟ್ಟ ಮತ್ತು ಅದಕ್ಕೆ ದೊರೆಯಬಹುದಾದ ಬೆಲೆ ಇವುಗಳ ಮೇಲೆ ಕೃಷಿಕನ ಕಸಬು ಲಾಭದಾಯಕವೆ, ಅಲ್ಲವೆ ಎಂಬುದು ನಿರ್ಧಾರವಾಗುತ್ತದೆ. ಉತ್ಪಾದನೆಯ ವೆಚ್ಚ ಮತ್ತು ಇಳುವರಿಯ ಮಟ್ಟಗಳು ಒಣಬೇಸಾಯ ಮತ್ತು ನೀರಾವರಿ ಬೇಸಾಯಗಳಲ್ಲಿ ಭಿನ್ನ ಭಿನ್ನವಾಗಿರುತ್ತವೆ. ಒಣಬೇಸಾಯ ಜಾರಿಯಲ್ಲಿರುವೆಡೆಗಳಲ್ಲಿ ಕನಿಷ್ಠ ಕೂಲಿದರ ನೀರಾವರಿ ಬೇಸಾಯವಿರುವೆಡೆಗಳಲ್ಲಿರುವುದಕ್ಕಿಂತ ಕಡಿಮೆಯಾಗಿರುತ್ತದೆ. ಒಬ್ಬ ರೈತ ಈ ಎರಡು ಮಾದರಿಯ ಬೇಸಾಯಗಳನ್ನೂ ನಡೆಸುತ್ತಿರಬಹುದು ಮತ್ತು ಒಂದೇ ಗ್ರಾಮದಲ್ಲಿ ಕೆಲವರಿಗೆ ನೀರಾವರಿ ಬೇಸಾಯವಿಲ್ಲದಿರಬಹುದು. ಆದ್ದರಿಂದ ಅವರು ನೇಮಿಸಿಕೊಳ್ಳುವ ಕಾರ್ಮಿಕರ ಕೂಲಿ ಬೇರೆಯವರು ಕೊಡುವ ಕೂಲಿಗಿಂತ ಕಡಿಮೆ ಇರಬೇಕೆ ಎಂಬ ಪ್ರಶ್ನೆ ತಾನಾಗಿಯೇ ಉದ್ಭವಿಸುತ್ತದೆ. ಆದರೆ ಹಾಗೆ ಮಾಡುವುದು ಸಾಧ್ಯವಾಗದಿರಬಹುದು. ಅಲ್ಲದೆ ಕೂಲಿ ದರವನ್ನು ಉತ್ಪನ್ನದ ಬೆಲೆಗೆ ಸರಿಹೊಂದಿಸಬೇಕು. ಆದರೆ ಕಾರ್ಮಿಕರನ್ನು ನೇಮಿಸಿಕೊಂಡು ಉತ್ಪಾದನೆ ಮಾಡಿಯಾದ ಅನಂತರ ಮಾರಾಟ ಮಾಡಿದಾಗಲೇ ಅವನಿಗೆ ತನ್ನ ಉತ್ಪನ್ನಕ್ಕೆ ಸಿಗುವ ಬೆಲೆ ಗೊತ್ತಾಗುತ್ತದೆ. ಅಂದರೆ ವ್ಯವಸಾಯೋತ್ಪನ್ನಗಳ ಬೆಲೆಗಳನ್ನು ನಿಗದಿ ಮಾಡಿದಲ್ಲದೆ ಕೃಷಿ ಕಾರ್ಮಿಕರ ಕನಿಷ್ಠ ಕೂಲಿಯನ್ನು ನಿಗದಿ ಮಾಡುವುದು ಸಾಧ್ಯವಾಗಲಾರದು. ಇಷ್ಟಾನುಸಾರ ಕನಿಷ್ಠ ಕೂಲಿಯನ್ನು ನಿಗದಿ ಮಾಡಿದ್ದೇ ಆದರೆ ಸಣ್ಣ ಹಿಡುವಳಿದಾರರಿಗೆ ತುಂಬ ಹಿಂಸೆಯಾಗುತ್ತದೆ. ಹಾಗೆಯೇ ಕೂಲಿದರಗಳನ್ನು ಗೇಣಿದಾರರು ಕೊಡುವ ಲಾವಣಿಗಳಿಗೆ ಸರಿಹೊಂದಿಸಬೇಕು. ದೊಡ್ಡ ಭೂಮಾಲೀಕರಿಗೆ ಸರಿ ಹೋಗುವ ಕೂಲಿ ಸಣ್ಣ ಹಿಡುವಳಿದಾರರಿಗೆ ಭಾರಿ ಹೊರೆಯಾಗುತ್ತದೆ. ಕೃಷಿ ಕೂಲಿಯನ್ನು ಹಣ, ಧಾನ್ಯ ಮತ್ತಿತರ ರೂಪಗಳಲ್ಲಿ ಕೊಡುವುದರಿಂದ ಸಮಾನ ಕೂಲಿದರಗಳನ್ನು ನಿಗದಿ ಮಾಡುವುದು ಕಷ್ಟವಾಗುತ್ತದೆ. ಹಾಗೂ ಇಷ್ಟಾನುಸಾರ ಒಂದು ದರವನ್ನು ನಿಗದಿ ಮಾಡಿದ್ದೇ ಆದಲ್ಲಿ ಇದರಿಂದ ಸಣ್ಣ ಹಿಡುವಳಿದಾರರಿಗೂ ಗೇಣಿದಾರರಿಗೂ ತೊಂದರೆಯಾಗಿ ಅವರು ಕೂಲಿಯಾಳುಗಳನ್ನು ನೇಮಿಸಿಕೊಳ್ಳದೆ ಹೋಗಬಹುದು; ತಮ್ಮ ಕೃಷಿ ಕಾರ್ಯಗಳನ್ನು ಆದಷ್ಟು ಮಟ್ಟಿಗೆ ತಾವೇ ಹೆಚ್ಚುಕಾಲ ದುಡಿದು, ಮುಗಿಸಿಕೊಳ್ಳಬಹುದು; ಮತ್ತು ತಮ್ಮ ನೆರೆಹೊರೆಯವರ ಸಹಾಯ ಪಡೆಯಬಹುದು. ಹೀಗಾಗಿ ಕನಿಷ್ಠ ಕೂಲಿ ದರವನ್ನು ಯಾವ ಆಧಾರವೂ ಇಲ್ಲದೆ ಅಧಿಕ ಮಟ್ಟದಲ್ಲಿ ನಿಗದಿ ಮಾಡಿದರೆ ಕೊನೆಯಲ್ಲಿ ಕಾರ್ಮಿಕರಿಗೆ ಬೇಡಿಕೆ ಕಡಿಮೆಯಾಗಿ ಅವರಿಗೇ ತೊಂದರೆಯಾಗುವ ಸಂಭವ ಹೆಚ್ಚು.. ಎಲ್ಲಕ್ಕೂ ಮೇಲಾಗಿ ಕೃಷಿ ಕಾರ್ಮಿಕರು ನಿರಕ್ಷರಕುಕ್ಷಿಗಳು. ಅವರಲ್ಲಿ ಸಂಘಟನ ಶಕ್ತಿ ಇಲ್ಲ. ಕೃಷಿ ಕೂಲಿಯ ಕನಿಷ್ಠ ಮಿತಿಯನ್ನು ನಿಗದಿ ಮಾಡಿದರೂ ಈ ವಿಷಯ ಎಷ್ಟೋ ಕಾರ್ಮಿಕರ ಗಮನಕ್ಕೆ ಬರದಿರಬಹುದು. ಬಹುತೇಕ ಕೃಷಿಕರಿಗೂ ಇದು ತಿಳಿಯದೆ ಇರಬಹುದು. ಇಂಥ ಸಂದರ್ಭಗಳಲ್ಲಿ ಕನಿಷ್ಠ ಕೂಲಿಯನ್ನು ಜಾರಿಗೆ ತಂದು ಮೇಲ್ವಿಚಾರಣೆ ನಡೆಸುವುದು ತುಂಬ ಅಗಾಧವಾದ ಕೆಲಸ. ಇದರ ಆಡಳಿತದ ಖರ್ಚು ದುಬಾರಿಯಾಗುತ್ತದೆ.        (ಆರ್.ಆರ್‍ಎಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ